ಶ್ವೇತಕೇತು
	ಉಪನಿಷತ್ತುಗಳಲ್ಲಿ ಉಲ್ಲೇಖವಾಗಿರುವ ಒಬ್ಬ ಋಷಿ. ಛಾಂದೋಗ್ಯ ಉಪನಿಷತ್ತಿನಲ್ಲಿ ಉದ್ಧಾಲಕ-ಶ್ವೇತಕೇತು ಸಂವಾದವಿದೆ. ಇವನ ತಂದೆ ಉದ್ಧಾಲಕ, ಇವನನ್ನು ಬ್ರಹ್ಮವಿದ್ಯೆ ಕಲಿಯಲು ಋಷಿಯ ಆಶ್ರಮಕ್ಕೆ ಕಳುಹಿಸಿದ. ಅಲ್ಲಿ ಈತ ಹಲವು ವರ್ಷ ಕಳೆದ ಮೇಲೆ, ತಾನು ಬ್ರಹ್ಮವಿದ್ಯೆಯನ್ನು ಕಲಿತಿದ್ದೇನೆ ಎಂಬ ಅಹಂಭಾವದಿಂದ ಮನೆಗೆ ಹಿಂತಿರುಗಿದ. ಮನೆಯಲ್ಲಿ ಇವನ ನಡತೆ ಗರ್ವದಿಂದ ಕೂಡಿತ್ತು. ಇದನ್ನು ಗಮನಿಸಿದ ಇವನ ತಂದೆ ಸ್ವತಃ ಬ್ರಹ್ಮವಿದ್ಯೆಯನ್ನು ಬೋಧಿಸಲು ಮುಂದಾದ. ಒಂದು ನ್ಯಗ್ರೋಧ ಹಣ್ಣನ್ನು ತರುವಂತೆ ಮಗನಿಗೆ ಸೂಚಿಸಿದ. ತಂದ ಹಣ್ಣನ್ನು ಕತ್ತರಿಸಿ ಬೀಜವನ್ನು ಹೊರತೆಗೆಯುವಂತೆ, ಆ ಬೀಜವನ್ನು ಕತ್ತರಿಸುವಂತೆ, ಪುನಃ ಪುನಃ ಕತ್ತರಿಸುವಂತೆ ಆಜ್ಞಾಪಿಸಿದ. ಕೊನೆಗೆ ಕತ್ತರಿಸಲು ಏನೂ ಉಳಿದಿರಲಿಲ್ಲ. ಪುನಃ ಕತ್ತರಿಸಲಾಗದ ಅವಿಭಾಜ್ಯ ವಾದ ಆ ಅಂಶದಿಂದ ಇದೇ ಆಲದಮರ ಹೇಗೆ ಹೊರಬಂದಿದೆಯೋ ಹಾಗೆಯೇ ಅವಿಭಾಜ್ಯವೂ ಸರಳವೂ ಆದ ಆತ್ಮತತ್ತ್ವದಿಂದ ಎಲ್ಲವೂ ಹೊರಬಂದಿದೆ ಎಂದು ಆತ್ಮದ ವಿಚಾರ ಬೋಧೆ ಮಾಡಿದ. ಆಗ ಇವನಿಗೆ ತನ್ನ ಸ್ವರೂಪದ, ಆತ್ಮದ ಅರಿವುಂಟಾಯಿತು. ಇವನಿಗೆ ಆರುಣಿ ಎಂಬ ಹೆಸರೂ ಇದೆ. ನಚಿಕೇತ ಇವನ ತಮ್ಮ. ಶ್ವೇತಕೇತು ವಿವಾಹ ವ್ಯವಸ್ಥೆಯನ್ನು ರೂಪಿಸಿದನೆಂದು ಮಹಾಭಾರತದಿಂದ ತಿಳಿದುಬರುತ್ತದೆ. 							
				(ವಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ